ನಿರ್ಜನ ರಸ್ತೆ ಮತ್ತು ಸೋಡಿಯಮ್ ದೀಪ


ಆಗಸದ ತುಂಬೆಲ್ಲ
ತುಂಬಿರುವ ಚುಕ್ಕಿಗಳ
ಎಣಿಸಿ ನೋಡುವರಿಹರು
ಜಲಧಿಯೊಡಲಲಿ ಹರಿವರಿವ
ನೀರ ಕಣಗಳ ಮೀನ ಕಣ್ಗಳ
ಆಳಕಿಳಿಯದೆ
ಅಳೆದು ನೋಡುವರು
~
ಬಾನಹಬ್ಬಕೆ ರಂಗು ಬಳಿದು
ಬಳಿಯೆ ಬೆಳಕ ಬೀರುತ ನಿಂದ
ರವಿಯ ಕಿರಣಗಳ
ಕಣ್ಮುಚ್ಚಿ ನೋಡುತಲೆ
ದೇವನವನಾರೆನ್ದು
ತಿಳಿಯದಲೆ ಕೇಳುವರು
~
ಚನ್ದಿರನು ಚೆಲ್ಲಿರುವ
ಕಣ್ಣುಗಳ ತುಂಬಿರುವ
ಬೆಳದಿಂಗಳನು ಸವಿಯಲು
ಸಮಯವೆಲ್ಲಿ?
~
ಭಾವಗಳು ನಲುಗಿರಲು
ಬೆಳಕು ಇಂಗಿದೆಯೆಂದು
ಹೃದಯದಾ ಬಾಗಿಲನು ತೆರೆದು
ಬೆಚ್ಚನುಸಿರಿನ ಕನ್ದೀಲಿನಲಿ
ಚೆಂಬೆಳಕ ಸೂಸ ಹೊರಟರೆ
ಕಂಡದ್ದು
ನಿರ್ಜನ ರಸ್ತೆ
ಮತ್ತು
ಸೋಡಿಯಮ್ ದೀಪ

No comments:

Post a Comment